ಜಾನ್, ದಮಾಸ್ಕಸಿನ ಸಂತ -
ಕ್ರಿ.ಶ.ಸು. 654-750. ದಮಾಸ್ಕಸ್‍ನಲ್ಲಿ ಹುಟ್ಟಿ ಜೆರೂಸಲೆಮ್‍ನಲ್ಲಿ ಕಾಲವಾದ ಪೌರಸ್ತ್ಯ ಸಂಪ್ರದಾಯದ ಕ್ರಿಶ್ಚನ್ ಸಂನ್ಯಾಸಿ. ಈತ ಗಣ್ಯಮನೆತನದಲ್ಲಿ ಹುಟ್ಟಿದವ. ತಂದೆ ತಾತಂದಿರು ದಮಾಸ್ಕಸ್‍ನ ಬಿeóÁಂಟಿನ್ ಮತ್ತು ಅರಬ್ಬೀ ರಾಜರ ಆಸ್ಥಾನದಲ್ಲಿ ಮಂತ್ರಿಪದವಿಗಳಲ್ಲಿದ್ದರು. ಚಿಕ್ಕಂದಿನಲ್ಲಿ ಸಮಗ್ರ ಗ್ರೀಕ್ ವಿದ್ಯಾಭ್ಯಾಸವನ್ನೂ ಅರಬ್ಬೀಭಾಷೆಯ ಮತ್ತು ಇಸ್ಲಾಮ್ ಧರ್ಮದ ಪರಿಜ್ಞಾನವನ್ನೂ ಪಡೆದ ಜಾನ್ ಮುಸ್ಲಿಮ್ ಅಧಿಕಾರವರ್ಗದವರ ವಿಶ್ವಾಸವನ್ನು ಸಂಪಾದಿಸಿ ಗಣ್ಯಸ್ಥಾನ ಪಡೆದ. ಆದರೆ ಕ್ರೈಸ್ತ ಮತವನ್ನು ಸಹಿಸದ ಕಲೀಫನ ಧೋರಣೆಯನ್ನು ಒಪ್ಪದೆ ರಾಜೀನಾಮೆಯಿತ್ತು ಜೆರೂಸಲೇಮ್ ಸಮೀಪದಲ್ಲಿ ಸಂನ್ಯಾಸಿಯಾಗಿ, ಗುರುದೀಕ್ಷೆಯನ್ನು ಪಡೆದ. ದೇವಶಾಸ್ತ್ರ ಸಂಬಂಧಿ ಕೃತಿಗಳನ್ನು ರಚಿಸುವುದಲ್ಲದೆ ಕ್ರೈಸ್ತ ಸಂನ್ಯಾಸ ಮಠಗಳಲ್ಲಿ ಪಾಠಪ್ರವಚನ ನಡೆಸುವುದು, ಜೆರೂಸಲೇಮ್‍ನಲ್ಲಿ ಬಹಿರಂಗ ಉಪದೇಶ ಭಾಷಣಗಳನ್ನು ಕೊಡುವುದು, ಧರ್ಮಾಧ್ಯಕ್ಷರಿಗೆ ದೇವಶಾಸ್ತ್ರ ವಿಚಾರದಲ್ಲಿ ಮಾರ್ಗದರ್ಶನವನ್ನೀಯುವುದು-ಇವೇ ಮೊದಲಾದ ಕಾರ್ಯಗಳಲ್ಲಿ ನಿರತನಾದ.

	ಜಾನನ ಸಾಧನೆಗಳಲ್ಲಿ ಮೂರ್ತಿಭಂಜಕರನ್ನು ವಿರೋಧಿಸಿರುವುದು ಮುಖ್ಯವಾದುದು. ಬಿಜಾóಂಟಿನ್ ಸಾಮ್ರಾಜ್ಯದ ಗಡಿಯಾಚೆ ಜೀವಿಸಿದ್ದುದರಿಂದ ಬಿಜಾóಂಟಿನ್ ಚಕ್ರಾಧಿಪತಿಯ ವಿಶೇಷ ಮನ್ನಣೆ ಹಾಗೂ ಬೆಂಬಲವನ್ನು ಪಡೆದ ಈ ಆಂದೋಲನವನ್ನು ತರ್ಕಬದ್ಧ ಹಾಗೂ ಶಾಸ್ತ್ರ ಸಮ್ಮತ ತರ್ಕಮಾಲಿಕೆಗಳನ್ನು ಪ್ರಕಟಿಸುವುದರ ಮೂಲಕ ಪ್ರಬಲವಾಗಿ ವಿರೋಧಿಸಿದ. ಈತನ ನಿಲುವನ್ನು ಸನಾತನ ಕ್ರೈಸ್ತ ಧರ್ಮ ಒಪ್ಪಿ ಪುರಸ್ಕರಿಸಿತು.

	ಜಾನನ ಬರೆಹಗಳ ವಿಷಯವ್ಯಾಪ್ತಿ ದೊಡ್ಡದು. ದೇವಶಾಸ್ತ್ರ, ಸಂನ್ಯಾಸ ಜೀವನದ ತತ್ತ್ವ ಮತ್ತು ಆಚರಣೆ, ಪ್ರಾರ್ಥನಾವಳಿಗಳು, ಪಾಲನ ಧರ್ಮಪತ್ರಗಳ ವ್ಯಾಖ್ಯಾನ, ಸಂತರ ಜೀವನ ಚರಿತ್ರೆಗಳು, ಕನ್ಯಾಮೇರಿಯಮ್ಮನನ್ನು ಕುರಿತಂತೆ ಮೂರು ಪ್ರಖ್ಯಾತ ಧರ್ಮೋಪದೇಶಗಳು-ಇವು ಇವನ ಕೃತಿಗಳು.

	ಪಾಶ್ಚಾತ್ಯ ಧರ್ಮಸಭೆಯವರು ಗ್ರೀಕ್ ದೇವಶಾಸ್ತ್ರಜ್ಞರಲ್ಲಿ ಪ್ರಾತಿನಿಧಿಕ ಸ್ಥಾನವನ್ನು ಜಾನನಿಗೆ ಕೊಟ್ಟರು. ಜಾನನ ಕೃತಿಗಳು ಸಿರಿಯಕ್, ಅರಬ್ಬೀ, ಬಲ್ಗೇರಿಯನ್, ಆರ್ಮೇನಿಯನ್, ಜಾರ್ಜನ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ 12ನೆಯ ಶತಮಾನದೊಳಗೆ ತರ್ಜುಮೆಯಾಗಿರುವುದು ಅಂದಿನವರಲ್ಲಿ ಈತ ಎಷ್ಟು ಜನಪ್ರಿಯನಾಗಿದ್ದನೆಂಬುದನ್ನು ತೋರಿಸುತ್ತದೆಯಾದರೂ ಇವನ ಬರಹಗಳಲ್ಲಿ ಸ್ವೋಪಜ್ಞತೆ ಕಡಿಮೆ. ಹೀಗಿದ್ದರೂ ದೇವಶಾಸ್ತ್ರಚಿಂತನದ ಗತಿ ನಿಧಾನವಾಗಿರುವ ಆ ಕಾಲದಲ್ಲಿ ಜಾನ್ ಮಾಡಿದ ಶಾಸ್ತ್ರಸೇವೆ ಗಣನೀಯ ಎನ್ನಬೇಕು.								(ಇ.ಎನ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ